ತಿಮಿಧ್ವಜ 
ದಂಡಕಾರಣ್ಯದ ಬಳಿ ವೈಜಯಂತವೆಂಬ ಪಟ್ಟಣದಲ್ಲಿ ರಾಜ್ಯಭಾರ ಮಾಡುತ್ತಿದ್ದ ಒಬ್ಬ ರಾಜ. ಶಂಬರನೆಂಬುದು ಈತನ ಇನ್ನೊಂದು ಹೆಸರು. ಒಮ್ಮೆ ಈತನಿಗೂ ಇಂದ್ರನಿಗೂ ಯುದ್ಧ ನಡೆದು ಪರಾಜಿತನಾಗಲು ಇಂದ್ರ ದಶರಥನ ಸಹಾಯ ಪಡೆದು ಈತನನ್ನು ಗೆದ್ದ. ಆಗ ದಶರಥನ ಸಂಗಡ ಕೈಕೆಯಿಯೂ ಸಾರಥಿಯಾಗಿ ಹೋಗಿದ್ದಳು. ದಶರಥ ತಿಮಿಧ್ವಜನೊಂದಿಗೆ ಯುದ್ಧಮಾಡುತ್ತಿದ್ದಾಗ ತಿಮಿಧ್ವಜ ಬಿಟ್ಟ ಒಂದು ಬಾಣದಿಂದ ದಶರಥ ಎಚ್ಚರ ತಪ್ಪಿ ಬಿದ್ದ. ಆ ಸಮಯದಲ್ಲಿ ಕೈಕೆಯಿ ತುಂಬ ಚಮತ್ಕಾರದಿಂದ ರಥವನ್ನು ಬೇರೊಂದು ಕಡೆಗೆ ನಡೆಯಿಸಿಕೊಂಡು ಹೋಗಿ ದಶರಥನನ್ನು ಉಪಚರಿಸಿದಳು. ಎಚ್ಚೆತ್ತ ದಶರಥ ಕೈಕೆಯಿಯ ಕಾರ್ಯಕ್ಕೆ ಮೆಚ್ಚಿ ಎರಡು ವರಗಳನ್ನು ಕೊಟ್ಟ. ಮುಂದೆ ಈ ವಾಗ್ದಾನವನ್ನೇ ಉಪಯೋಗಿಸಿಕೊಂಡು ಕೈಕೆಯಿ ರಾಮನ ವನವಾಸಕ್ಕೆ ಕಾರಣಳಾದಳು. ಈ ವೃತ್ತಾಂತ ರಾಮಾಯಣದಲ್ಲಿ ಬಂದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ